ಕುದುರೆಬಾಲದ ಗಿಡ ಪುಷ್ಪರಹಿತ ಬಹುವಾರ್ಷಿಕ ಗಿಡ.
ಟೆರಿಡೋಫೈಟ ವಿಭಾಗ, ಈಕ್ವಿಸಿಟೆನೀ ವರ್ಗ, ಈಕ್ವಿಸಿಟೇಲಿಸ್ ಗಣ, ಈಕ್ವಿಸಿಟೇಸೀ ಕುಟುಂಬಕ್ಕೆ ಸೇರಿದೆ. ಈಕ್ವಿಸಿಟಮ್ ನಾಮಧೇಯ.
ಇಪ್ಪತ್ತೈದು ಪ್ರಭೇದಗಳಿವೆ. ಕೊಳಗಳಲ್ಲಿ ಅಥವಾ ಜಿನುಗುಪ್ರದೇಶಗಳಲ್ಲಿ ಕೆಲವು ಮತ್ತೆ ಕೆಲವು ಹುಲ್ಲುಗಾವಲುಗಳಲ್ಲಿ ಅಥವಾ ಒಣಪ್ರದೇಶಗಳಲ್ಲಿ ಬೆಳೆಯುತ್ತವೆ. ಆಸ್ಟ್ರೇಲಿಯ, ನ್ಯೂಜಿಲೆಂಡ್ ಬಿಟ್ಟು ಪ್ರಪಂಚದ ಎಲ್ಲ ಭಾಗಗಳಲ್ಲಿಯೂ ಕುದುರೆಬಾಲದ ಗಿಡ ಹರಡಿದೆ. ಭಾರತದಲ್ಲಿರುವ ಈಕ್ವಿಸಿಟಮ್ ಡಿಬೈಲ್ ಎಂಬ ಪ್ರಭೇದ ಮೈಸೂರಿನ ಹತ್ತಿರ ಕಾವೇರಿ ನದಿ ದಡದಲ್ಲಿ ಹೇರಳವಾಗಿ ಬೆಳೆಯುತ್ತದೆ.
ಈಕ್ವಿಸಿಟಮ್ ಜೈಗಾಂಶಿಯಮ್ ಪ್ರಭೇದ ಸುಮಾರು ಹನ್ನೆರಡು ಮೀಟರುಗಳವರೆಗೆ ಬಳ್ಳಿಯಂತೆ ಬೆಳೆಯುತ್ತದೆ. ಮಿಕ್ಕ ಪ್ರಭೇದಗಳು ಸಾಮಾನ್ಯವಾಗಿ ಒಂದು ಮೀಟರು ಎತ್ತರಕ್ಕೆ ಬೆಳೆಯುತ್ತವೆ. ಈ ಗಿಡಗಳು ಹೇರಳವಾಗಿ ಕವಲೊಡೆದು ಕುದುರೆಬಾಲದಂತೆ ಕಾಣುವುದರಿಂದ ಗಿಡದ ಹೆಸರು ಅನ್ವರ್ಥಕವಾಗಿದೆ. ಕವಲುಗಳು ಎಲೆಗಳು ಅಕ್ಷರೇಖೆ ಬಿಟ್ಟು ಪಕ್ಕದಲ್ಲಿ ಹುಟ್ಟಿರುವುದು ವ್ಯಾಸ್ಕ್ಯುಲರ್ ಗಿಡಗಳಲ್ಲಿಯೇ ಒಂದು ಅಸಾಧಾರಣ ಗುಣ. ದುರ್ಬಲವಾದ ಬೇರುಕಾಂಡ ತೆಳ್ಳಗಿದೆ. ಇದು ಭೂಮಿಯ ಸುಮಾರು ಆಳದಲ್ಲಿ ಹುದುಗಿರುತ್ತದೆ. ಗೆಣ್ಣುಗಳನ್ನು ಬಿಟ್ಟು ಗಿಡದ ಎಲ್ಲ ಭಾಗ ಟೊಳ್ಳು. ಸಾಲ್ಗೊಳವೆಯಂತೆ ಜೋಡಿಸಲ್ಪಟ್ಟಿರುವ ಕಾಂಡ ಗೆಣ್ಣುಗಳ ಹತ್ತಿರ ಒಡೆದು ಸಣ್ಣ ತುಂಡುಗಳಾಗಿ ಬೇರ್ಪಡುವುದು ಒಂದು ಸೋಜಿಗದ ಸಂಗತಿ. ದ್ಯುತಿಸಂಶ್ಲೇಷಣೆ ಕ್ರಿಯೆಯಲ್ಲಿ ತೊಡಗಿ ಆಹಾರ ತಯಾರುಮಾಡುವ ಹಸಿರುಕಾಂಡ ಇಂಟರ್‍ಕ್ಯಾಲರಿ ಮೆರಿಸ್ಟೆಮ್ ಸಹಾಯದಿಂದ ಬೆಳೆಯುತ್ತದೆ. ಹಳ್ಳದಿಂಡುಗಳಿಂದ ಆವೃತವಾದ ಹೊರಮೈ ಸಿಲಿಕ ಎಂಬ ಲೋಹದ ಪೊರೆಯಿಂದ ಒರಟಾಗಿದೆ. ಪೊರೆಯಂತಿರುವ ಸಣ್ಣ ಎಲೆಗಳು ಅತಿ ಸರಳ, ಹಾಗೂ ಸೂಕ್ಷ್ಮ. ಒಂದೇ ಗುಂಪಿನಲ್ಲಿದ್ದು ಗೆಣ್ಣುಗಳ ಸುತ್ತಲೂ ಬೆಸೆದುಕೊಂಡಿವೆ. ಗೆಣ್ಣುಗಳ ಇಕ್ಕಡೆಗಳಲ್ಲಿರುವ ಮೆರಿಸ್ಟೆಮ್ ಅನ್ನು ರಕ್ಷಿಸುವುದು ಮಾತ್ರ ಅವುಗಳ ಕೆಲಸ. ಬೇರುಗಳು ಸಹ ಬೇರುಕಾಂಡದ ಗೆಣ್ಣುಗಳಿಂದ ಹುಟ್ಟಿವೆ.
ಸಂತಾನವೃದ್ಧಿಗಾಗಿ ಈ ಗಿಡ ಗೆಡ್ಡೆಗಳನ್ನು ಬಿಡುತ್ತದೆ. ಬೀಜಕಣಗಳು ನಿರ್ಲಿಂಗ ಸಂತಾನಾಭಿವೃದ್ಧಿಯನ್ನು ನಡೆಸಿಕೊಡುತ್ತವೆ. ಏಕರೂಪದ ಈ ಕಣಗಳು ಅಂಡಾಕಾರದ ಬೀಜಕೋಶದಲ್ಲಿ ಹೇರಳವಾಗಿ ಉತ್ಪತ್ತಿಯಾಗುತ್ತವೆ. 8ರಿಂದ 10ರ ವರೆಗಿನ ಬೀಜಕೋಶದ ಗುಂಪು ಸ್ಪೊರಾಂಜಿಯೋಫೋರ್ಸ್‍ನ ಬಿಲ್ಲೆಗಳಿಗೆ ಅಂಟಿಕೊಂಡಿವೆ. ತೊಟ್ಟುಗಳನ್ನೊಳಗೊಂಡ ಕೋನಾಕೃತಿಯ ಬಿಲ್ಲೆಗಳ ಸ್ಪೊರಾಂಜಿಯೋಫೋರ್ಸ್ ಕಾಂಡಗಳ ತುದಿಯಲ್ಲಿ ಒತ್ತಾಗಿ ಬೆಳೆದು ಶಂಕುವಿನಾಕಾರದ ಒಂದು ಮುಖ್ಯ ಭಾಗವಾಗಿದೆ. ಅದಕ್ಕೆ ಸ್ಟ್ರೊಬೈಲಸ್ ಅಥವಾ ಕೋನ್ ಎಂದು ಹೆಸರು. ಬೀಜಕಣ ಮೊಳೆತು ಅದು ಗ್ಯಾಮಿಟೋಫೈಟ್ ಆಗಿ ವೃದ್ಧಿಸುತ್ತದೆ. ನೆಟ್ಟಗೆ ಬೆಳೆದ ಹಸಿರು ಸೀಳಿಕೆಗಳ ಗ್ಯಾಮಿಟೋಫೈಟ್ ಉದ್ದವಾಗಿರುವುದಲ್ಲದೆ ಗೋಳಾಕಾರದ ಮೆತ್ತನೆಯಂತೆ ಕಾಣುವುದು. ಲೈಂಗಿಕ ಸಂತಾನದ ಅಂಗಾಂಗಗಳಾದ ಆಂಥೆರಿಡಿಯ, ಆರ್ಚಿಗೋನಿಯ ಎರಡು ಅದರಲ್ಲಿರುವುವು. ಮುಂದೆ ಈ ಸಂತಾನೋತ್ಪತ್ತಿಯಲ್ಲಿ ಸ್ಪೋರೋಫೈಟ್ ಎಂಬ ಮೂಲಗಿಡ ಹುಟ್ಟುತ್ತದೆ.
ಈ ಗಿಡವನ್ನು ತಟ್ಟೆ, ಪಾತ್ರೆ, ಮಡಕೆ ಮುಂತಾದುವನ್ನು ಉಜ್ಜಿ ಶುಭ್ರ ಮಾಡಲು ಉಪಯೋಗಿಸುತ್ತಿದ್ದರು. ಇದು ತೊಡಕನ್ನು ಉಂಟುಮಾಡುವ ಹಲುಬು ಕಳೆಯೂ ಹೌದು.
ಕುದುರೆಬಾಲದ ಗಿಡ ಪುಷ್ಪರಹಿತ ಬಹುವಾರ್ಷಿಕ ಗಿಡ.